ಗೇವಿಯಲ್ -
	ಕ್ರಾಕೊಡಿಲಿಯ ಗಣದ ಗೇವಿಯಾಲಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಮೊಸಳೆ. ಗೇವಿಯಾಲಿಸ್ ಗ್ಯಾಂಜೆಟಿಕಸ್ ಇದರ ವೈಜ್ಞಾನಿಕ ನಾಮ. ಭಾರತ, ಬರ್ಮ ಮತ್ತು ಮಲೇಷಿಯಗಳ ನದಿಗಳಲ್ಲಿ ವಾಸಿಸುತ್ತದೆ.  ಭಾರತದ ಗಂಗಾನದಿಯಲ್ಲಿ ಇದನ್ನು ಕಾಣಬಹುದು.  ತೆಳುವಾದ ಮತ್ತು ಉದ್ದವಾದ ದೇಹವುಳ್ಳ ಪ್ರಾಣಿಯಿದು.  ದೇಹದ ಉದ್ದ 15'-20'. ಮೂತಿಯೂ ಕಿರಿದಾಗಿ ಉದ್ದವಾಗಿದೆ. ಎರಡು ದವಡೆಗಳಲ್ಲೂ ಹೆಚ್ಚುಕಡಿಮೆ ಸಮಗಾತ್ರದ ಹಲ್ಲುಗಳಿವೆ.  ಕಾಲುಗಳಲ್ಲಿನ ಬೆರಳುಗಳೆಲ್ಲವೂ ಪೊರೆಯೊಂದರಿಂದ ಕೂಡಿಕೊಂಡಿದ್ದು ಈಜಲು ಸಹಾಯಕವಾಗಿರುವ ಜಾಲಪಾದಗಳಾಗಿವೆ. ಮೂಗಿನ ಹೊಳ್ಳೆಗಳು ಮೃದುವಾಗಿದ್ದು ಬೇಕೆಂದಾಗ ಊದಿಕೊಳ್ಳಬಲ್ಲವು. ಮೀನುಗಳೇ ಗೇವಿಯಲಿನ ಪ್ರಧಾನ ಆಹಾರ.
(ಎಂ.ಡಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ